ಕ್ರಿಸ್ಟಿ, ಆಗಥ ಮೇರಿ ಕ್ಲಾರಿಸ

1891-. ಇಂಗ್ಲಿಷ್ ಕಾದಂಬರಿಗಾರ್ತಿ. ಅನೇಕ ಪತ್ತೇದಾರಿ ಕಾದಂಬರಿಗಳನ್ನು ಬರೆದು ಪ್ರಸಿದ್ಧಳಾಗಿದ್ದಾಳೆ. ಆರ್ಚಿಬಲ್ಡ್ ಕ್ರಿಸ್ಟಿಯೆಂಬ ಸೈನ್ಯಾಧಿಕಾರಿಯನ್ನು ಮದುವೆಯಾದಳು (1914). 1920ರಲ್ಲಿ ದಿ ಮಿಸ್ಟೀರಿಯಸ್ ಅಫೇರ್ ಎಟ್ ಸ್ಟೈೀಲ್ಸ್ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿದಳು. ಇದರಲ್ಲಿ ಈಕೆ ಸೃಷ್ಟಿಸಿದ ಬೆಲ್ಜಿಯನ್ ಪತ್ತೇದಾರ ಹಕ್ರ್ಯೂಲ್ ಪಾಯ್ರಾನ ಪ್ರಥಮ ಪರಿಚಯವಾಗುತ್ತದೆ. ದಿ ಮರ್ಡರ್ ಆಫ್ ರೋಜರ್ ಆಕ್ರಾಯ್ಡ್‍ನಲ್ಲಿ (1926) ಕತೆಗಾರನೇ ಕೊಲೆಗಾರನೆಂಬ ವಿಷಯ ವಿಸ್ಮಯಕಾರಿಯಾಗಿದೆ. ಈ ನಡುವೆ ಕ್ರಿಸ್ಟಿ ಇದ್ದಕ್ಕಿದ್ದಂತೆ ಕಾಣಳಾದಳು ಎಂಬ ಸುದ್ದಿ ಹಬ್ಬಿ ಹಲವರ ಗಮನ ಸೆಳೆಯಿತು. ನಿಜಕ್ಕೂ ಈಕೆ ಆಗ ಮರವೆರೋಗಕ್ಕೆ ತುತ್ತಾಗಿ ಯಾರಿಗೂ ಹೇಳದಂತೆ ಯಾರ್ಕ್‍ಷೈರಿನ ಆಸ್ಪತ್ರೆ ಸೇರಿದ್ದಳು. 1928ರಲ್ಲಿ ವಿವಾಹವಿಚ್ಛೇದನ ಮಾಡಿಕೊಂಡು 1930ರಲ್ಲಿ ಮ್ಯಾಲೋವನ್ ಎಂಬ ಪ್ರಾಕ್ತನ ಸಂಶೋಧಕನನ್ನು ಮದುವೆಯಾಗಿ ಆತನೊಡನೆ ಏಷ್ಯಖಂಡದಲ್ಲಿ ಸಂಚರಿಸಿ ಕಾದಂಬರಿಗಳನ್ನು ಬರೆದು ಬಹಳ ಹಣ ಗಳಿಸಿದಳು. ಪತಿಯ ಪ್ರಾಕ್ತನ ಸಂಶೋಧನೆಗಳ ಸುತ್ತ ಕ್ರಿಸ್ಟಿ ನೇಯ್ದಿರುವ ಕಾದಂಬರಿ ಎಂದರೆ ಮರ್ಡರ್ ಇನ್ ಮೆಸಪೊಟೇಮಿಯ. ಈಕೆಯ ಮೂರು ನಾಟಕಗಳು ಏಕಕಾಲದಲ್ಲಿ ವೆಸ್ಟ್‍ಎಂಡ್‍ನಲ್ಲಿ ಪ್ರದರ್ಶಿತವಾದುವು.

	ಈಕೆಯ ಪ್ರಸಿದ್ಧ ಕಾದಂಬರಿಗಳು ಇವು: ದಿ ಮಿಸ್ಟರಿ ಆಫ್ ದಿ ಬ್ಲೂ ಟ್ರೇನ್ (1928). ದಿಸೆವೆನ್ ಡಯಲ್ಸ್ ಮಿಸ್ಟರಿ (1929), ಲಾರ್ಡ್ ಎಜ್‍ವೇರ್ ಡೈಸ್ (1933). ಮೇರಿ ವೆಸ್ಟ್‍ಮ್ಯಾಕಾಟ್ ಎಂಬ ಬದಲು ಹೆಸರನ್ನಿಟ್ಟುಕೊಂಡು ಈಕೆ ಆಬ್ಸೆಂಟ್ ಇನ್ ದಿ ಸ್ಪ್ರಿಂಗ್ (1944), ದಿ ರೋಸ್ ಅಂಡ್ ದಿ ಯೂ ಟ್ರೀ (1948) ಎಂಬ ಕಾದಂಬರಿಗಳನ್ನೂ ಬರೆದಳು. ವಿಟ್‍ನೆಸ್ ಫಾರ್ ದಿ ಪ್ರಾಸೆಕ್ಯೂಷನ್ ಮೊದಲಾದ ಈಕೆಯ ಕೆಲವು ಕಥೆಗಳು ಚಲನಚಿತ್ರಗಳಾಗಿ ಖ್ಯಾತಿಗಳಿಸಿವೆ. ಈಕೆ ರಾಯಲ್ ಸೊಸೈಟಿ ಆಫ್ ಲಿಟರೆಚರ್ ಸಂಸ್ಥೆಯ ಫೆಲೊ ಆಗಿದ್ದಳಲ್ಲದೆ 1956ರಲ್ಲಿ ಈಕೆಗೆ ಸಿ.ಬಿ.ಇ. ಪ್ರಶಸ್ತಿಯೂ ದೊರಕಿತು. 		(ಎಚ್.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ